Tuesday, 13 September 2011

ದರ್ಶನ್ ದಂಪತಿ ವಿವಾದ: ಚಿತ್ರನಟರ ರಾಜಿ ಯತ್ನ ನ್ಯಾಯಾಂಗ ನಿಂದನೆಯೇ?


ಪತ್ನಿ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಚಿತ್ರನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರ ನಡುವೆ ರಾಜಿ ಸಂಧಾನ ನಡೆಸಲು ಪ್ರಯತ್ನಿಸಿರುವ ಚಿತ್ರನಟರಾದ ಅಂಬರೀಷ್, ಜಗ್ಗೇಶ್, ವಿಜಯ್ ಹಾಗೂ ಇತರರು ನ್ಯಾಯಾಂಗ ನಿಂದನೆಗೆ ಗುರಿಯಾಗುವ ಸಾಧ್ಯತೆ ಇದೆ.
ಕಾರಣ, ನ್ಯಾಯಾಲಯದಲ್ಲಿ ಪ್ರಕರಣವು ಇತ್ಯರ್ಥಕ್ಕೆ ಬಾಕಿ ಇರುವಾಗ, ಅದರ ಮಧ್ಯೆ ಇವರು ಪ್ರವೇಶ ಮಾಡಿದ್ದಾರೆ ಎಂಬ ಆರೋಪ. ಈ ಹಿನ್ನೆಲೆಯಲ್ಲಿ ಎಲ್ಲರ ವಿರುದ್ಧ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಕ್ರಿಮಿನಲ್ ಮೊಕದ್ದಮೆ ಹೂಡಲು ವಕೀಲ ಎ.ವಿ.ಅಮರನಾಥನ್ ನಿರ್ಧರಿಸ್ದ್ದಿದು, ಈ ಕುರಿತು ದಾಖಲೆಗಳನ್ನು ಕಲೆಹಾಕಿದ್ದಾರೆ.

ನ್ಯಾಯಾಂಗ ನಿಂದನೆ ಏಕೆ?: ನ್ಯಾಯಾಂಗ ನಿಂದನೆ ಎಂದರೆ ನ್ಯಾಯಾಲಯದ ಮಧ್ಯೆ ಅನಗತ್ಯ ಪ್ರವೇಶ ಮಾಡುವುದು. ಈ ಪ್ರಕರಣದಲ್ಲಿಯೂ ಈ ಚಿತ್ರನಟರು ಇದೇ ತಪ್ಪು ಎಸಗಿದ್ದಾರೆ ಎನ್ನುವುದು ಅಮರನಾಥನ್ ಅವರ ಆರೋಪ.

`ಪತಿಯಿಂದ ಗಂಭೀರವಾಗಿ ಹಲ್ಲೆಗೆ ಒಳಗಾದ ವಿಜಯಲಕ್ಷ್ಮಿ ಈ ಕುರಿತು ವೈದ್ಯರ ಮುಂದೆ ಹೇಳಿಕೆ ನೀಡಿದರು. ಈ ಹೇಳಿಕೆಯ ದಾಖಲೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
  ಯಾವುದೇ ಒಂದು ಪ್ರಕರಣವು ಪೊಲೀಸರ ಮುಂದೆ ಹೋದ ತಕ್ಷಣ ಅಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿ ಅದನ್ನು 24 ಗಂಟೆ ಒಳಗೆ ಕೋರ್ಟ್‌ಗೆ ನೀಡಲಾಗುತ್ತದೆ.

  ಒಮ್ಮೆ ಕೋರ್ಟ್‌ಗೆ ದೂರು ದಾಖಲಾದ ತಕ್ಷಣ ಅದು ಕೋರ್ಟ್ ವ್ಯಾಪ್ತಿಗೆ ಒಳಪಡುತ್ತದೆ. ಇದರ ಮಧ್ಯೆ ಪ್ರವೇಶ ಮಾಡುವ ಅಧಿಕಾರ ಯಾರಿಗೂ ಇಲ್ಲ.

`ಆದರೆ, ಈ ಪ್ರಕರಣದಲ್ಲಿ ವಿಜಯಲಕ್ಷ್ಮಿ ಅವರ ದೂರಿನ ಅನ್ವಯ ಇದೇ 8ರಂದು ಬೆಳಿಗ್ಗೆ ಸುಮಾರು 3.30ಕ್ಕೆ ಎಫ್‌ಐಆರ್ ದಾಖಲಾಗಿದ್ದು, ಅದೀಗ ಕೋರ್ಟ್‌ಗೆ ಬಿಟ್ಟ ವಿಷಯ. ಕೋರ್ಟ್ ಆದೇಶ ಹೊರಡಿಸುವ ಮುಂಚೆಯೇ ಈ ನಟರು ರಾಜಿ ಸಂಧಾನಕ್ಕೆ ಪ್ರಯತ್ನಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ನಟರ ಹೇಳಿಕೆಗಳ ಕುರಿತು ಸಾಕ್ಷಿಗಳಿವೆ. ಇದು ನ್ಯಾಯಾಂಗ ನಿಂದನೆ ಆಗಿದೆ. ದೂರುದಾರರ ಮೇಲೆ ಒತ್ತಡ ಹಾಕುವುದು, ಕೇಸನ್ನು ಹಿಂದಕ್ಕೆ ಪಡೆಯುವಂತೆ ಬೆದರಿಕೆ ಹಾಕುವುದು ಇವೆಲ್ಲ ಅಪರಾಧ` ಎಂದು ಅವರು `ಪ್ರಜಾವಾಣಿ`ಗೆ ತಿಳಿಸಿದರು.

ರಾಜಿ ಸಂಧಾನ ಸಾಧ್ಯವಿಲ್ಲ: ಈ ಮಧ್ಯೆ, ಭಾರತೀಯ ದಂಡ ಸಂಹಿತೆಯ (ಐಪಿಸಿ) 307 (ಕೊಲೆ ಯತ್ನ) ಹಾಗೂ 498ಎ (ಕೌಟುಂಬಿಕ ದೌರ್ಜನ್ಯ) ಪ್ರಕರಣಗಳಲ್ಲಿ ಕೋರ್ಟ್ ಆದೇಶ ಹೊರಡಿಸುವ ಪೂರ್ವದಲ್ಲಿ ದಂಪತಿ ಮಧ್ಯೆ ರಾಜಿ ಸಂಧಾನಕ್ಕೆ ಅವಕಾಶ ಇಲ್ಲ ಎನ್ನುವುದು ಕಾನೂನು ತಜ್ಞರ ಅಭಿಮತ.

ಈ ಕುರಿತು ಮಾಹಿತಿ ನೀಡಿದ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಅವರು, 498ಎ ಅಡಿ ದಾಖಲಾಗುವ ದೂರುಗಳು `ರಾಜಿ ಸಂಧಾನಕ್ಕೆ ಯೋಗ್ಯ` ಎಂದು ಪರಿಗಣಿಸುವಂತೆ ಕಾನೂನು ಆಯೋಗಕ್ಕೆ ವಿಪರೀತ ಒತ್ತಡಗಳು ಬರುತ್ತಿವೆ. ಆದರೆ ಆ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈ ಕಾರಣ, ರಾಜಿಗೆ ಕಾನೂನಿನ ಅಡಿ ಅವಕಾಶ ಇಲ್ಲ` ಎಂದರು.

ಮಾಜಿ ನ್ಯಾಯಮೂರ್ತಿ ರವಿ ಬಿ. ನಾಯಕ್ ಹಾಗೂ ಹಿರಿಯ ವಕೀಲ ಎಂ.ಟಿ.ನಾಣಯ್ಯ ಅವರ ಪ್ರಕಾರ, ಯಾವುದೇ ಪ್ರಕರಣದಲ್ಲಿ ಕೊಲೆಗೆ ಯತ್ನ ನಡೆಸಿರುವುದು ಸಾಬೀತಾದರೆ ಅದಕ್ಕೆ ಜೀವಾವಧಿ ಶಿಕ್ಷೆಯಾಗುತ್ತದೆ. ಇಂತಹ ಪ್ರಕರಣದಲ್ಲಿ ರಾಜಿಯ ಪ್ರಶ್ನೆ ಇಲ್ಲ.

ಒಂದು ವೇಳೆ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಸಂದರ್ಭದಲ್ಲಿ ಮಾತ್ರ ದೂರನ್ನು ನ್ಯಾಯಾಲಯ ರದ್ದು ಮಾಡಬಹುದು.

ಇದೇ ಅಭಿಪ್ರಾಯ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಸ್.ಚಂದ್ರಮೌಳಿ ಅವರದ್ದು. ಅವರ ಪ್ರಕಾರ ಈ ಪ್ರಕರಣವನ್ನು ಪೊಲೀಸರು ಅಷ್ಟು ಸುಲಭದಲ್ಲಿ ಮುಚ್ಚಿಹಾಕಲು ಆಗುವುದಿಲ್ಲ.

ಇದರ ಸತ್ಯಾಸತ್ಯತೆಯನ್ನು ತನಿಖಾಧಿಕಾರಿಗಳು ಪರಿಶೀಲಿಸಬೇಕು. ವಿಜಯಲಕ್ಷ್ಮಿ ಅವರು ವೈದ್ಯರಲ್ಲಿ ನೀಡಿರುವ ಹೇಳಿಕೆಗಳು ಈಗ ದಾಖಲೆ. ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ ತನಿಖಾಧಿಕಾರಿ ಪ್ರಕರಣವನ್ನು ಮುಂದುವರಿಸಬೇಕಾಗುತ್ತದೆ..

-ಅಭಿ ಕನ್ನಡಿಗ..

Monday, 12 September 2011

"ಕವಿ"ರಾಜ" ನ ಸಂದರ್ಶನ..

 ಸಿನಿ ಸಾಹಿತಿಯಾಗಿ ಚಿತ್ರರಂಗದಲ್ಲಿ ದಶಕದ ಯಾನ ಪೂರೈಸಿರುವ ಕವಿರಾಜ್ ಖುಷಿಯಲ್ಲಿದ್ದಾರೆ. ಅದಕ್ಕೆ ಕಾರಣಗಳೂ ಸಾಕಷ್ಟು. ಬರೆದ ಹಾಡುಗಳ ಸಂಖ್ಯೆ 800ರ ಅಂಚಿಗೆ ತಲುಪಿದೆ. ಫಿಲ್ಮ್‌ಫೇರ್ ಪ್ರಶಸ್ತಿಯೂ ಮುಡಿಗೇರಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿವೆ. ಲೇಖನಿಗೆ ಬಿಡುವಿಲ್ಲದ ಕೆಲಸ. ಅವಕಾಶಗಳು ಸಾಲು ಸಾಲಾಗಿ ಅರಸಿ ಬರುತ್ತಿವೆ. ಸ್ನೇಹಿತರ ಜೊತೆಗೂಡಿ ದರ್ಶನ್ ಅಭಿನಯದ `ಬುಲ್ ಬುಲ್` ಚಿತ್ರ ನಿರ್ದೇಶಿಸಲೂ ಕೈ ಹಾಕಿದ್ದಾರೆ. ಜೊತೆಗೆ ಇದೇ ವರ್ಷ ದಾಂಪತ್ಯ ಗೀತೆ ಹಾಡುವುದಕ್ಕೂ ಮನಸ್ಸು ಮಾಡಿದ್ದಾರೆ.
ಮಾಧುರ್ಯಭರಿತ ಹಾಡುಗಳು ಜನರ ಮನಸಿನಲ್ಲಿ ಅಜರಾಮರವಾಗಿ ಉಳಿಯುತ್ತದೆ. ಕೆಲವೇ ದಿನ ಕೆಲವು ಜನರನ್ನು ರಂಜಿಸುವ ಹಾಡುಗಳಿಗಿಂತ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವ ಗೀತೆಗಳನ್ನು ನೀಡಬೇಕು ಎಂಬ ಆಶಯ ಅವರದ್ದು. ಹಾಡೆಂದರೆ ಒಂಟಿ ಪಯಣದ ಹಾದಿಯಲ್ಲೂ ನೂರಾರು ಜೊತೆಗಾರರನ್ನು ನೀಡುವ ಮಾಯಾಶಕ್ತಿ ಎನ್ನುವ ಕವಿರಾಜ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದು ಹೀಗೆ.
ಹೇಗೆನ್ನಿಸಿದೆ 10 ವರ್ಷದ ಹಾಡಿನ ಬದುಕು?
ತುಂಬಾ ಖುಷಿ ನೀಡಿದೆ. ಬರೆಯುವುದು ಹವ್ಯಾಸ ಮತ್ತು ವೃತ್ತಿ ಎರಡೂ ಆಗಿರುವುದರಿಂದ ಅದು ಎಂದೂ ಬೇಸರ ಮೂಡಿಸಿಲ್ಲ. ಆರಂಭದ ದಿನಗಳಲ್ಲಿ ಟಪ್ಪಾಂಗುಚ್ಚಿ ಹಾಡುಗಳಿಗೆ ಹೆಚ್ಚಿನ ಒಲವು ತೋರಿದ್ದೆ. ಆದರೆ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವುದು ಮಾಧುರ್ಯ ತುಂಬಿದ ಹಾಡುಗಳು ಮಾತ್ರ ಎಂದೆನಿಸಿದೆ. ಇದು ನನ್ನ ಅದೃಷ್ಟದ ವರ್ಷ. ಜನರಿಗೆ ಹಲವು ಹಾಡುಗಳು ಹಿಡಿಸಿವೆ. `ಆಪ್ತರಕ್ಷಕ`ದ ಗೀತೆಗೆ ಪ್ರಶಸ್ತಿಯೂ ಬಂದಿದೆ. `ಸಂಜು ವೆಡ್ಸ್ ಗೀತಾ` ಚಿತ್ರದ `ಗಗನವೇ ಬಾಗಿ...` ಹಾಡು ಅಪಾರ ಜನಪ್ರಿಯತೆ ಗಳಿಸಿದ ಬಳಿಕ ಜನ ಏನನ್ನು ಇಷ್ಟಪಡುತ್ತಾರೆ ಎಂಬುದು ಅರಿವಾಗಿದೆ.

ಅಮೆರಿಕದಲ್ಲಿರುವ ಕನ್ನಡಿಗರೊಬ್ಬರು ತಮ್ಮ ಪುಟ್ಟಮಗಳು ಸಂಗೀತ ಕೇಳಿ ಆ ಹಾಡನ್ನು ಇಷ್ಟಪಟ್ಟಿದ್ದಳು. ಅದರ ಅರ್ಥ ಬಿಡಿಸಿ ಹೇಳಿದ ಬಳಿಕ ಭಾರತದಲ್ಲಿ ಪ್ರೀತಿಯೆಂದರೆ ಎಷ್ಟು ಮಹತ್ವ ನೀಡುತ್ತಾರೆ ಎಂದು ಆಶ್ಚರ್ಯ ಪಟ್ಟಿದ್ದಳು ಎಂದು ಫೋನ್ ಮೂಲಕ ತಿಳಿಸಿದಾಗ ಬದುಕು ಸಾರ್ಥಕ ಎಂದೆನಿಸಿತು.

ಹಾಗಾದರೆ ಅಂತಹ ಹಾಡುಗಳಿಗೇ ಸೀಮಿತವಾಗುತ್ತೀರಾ?
ಹಾಗೇನಿಲ್ಲ. ಗೀತ ರಚನಕಾರನಾಗಿ ನಿರ್ದೇಶಕರು ಮತ್ತು ಜನ ಬಯಸುವುದು ಎರಡನ್ನೂ ನೀಡಬೇಕು. ಮೆಲೋಡಿ ಹಾಡು ಮಾತ್ರವಲ್ಲ ಬೇರೆ ಬೇರೆ ಬಗೆಯ ಹಾಡುಗಳನ್ನು ಬಯಸುವ ವರ್ಗವೂ ಇದೆ. ಅವರನ್ನೂ ಮರೆಯುವಂತಿಲ್ಲ. ಅದಕ್ಕಾಗಿಯೇ `ಊರಿಗೊಬ್ಳೆ ಪದ್ಮಾವತಿ...`ಯಂತಹ ಹಾಡುಗಳನ್ನೂ ಬರೆಯುತ್ತೇನೆ.

ಪದಗಳಿಗೆ ಸ್ಫೂರ್ತಿ?
ಹುಟ್ಟಿ ಬೆಳೆದ ತೀರ್ಥಹಳ್ಳಿ-ಹೊಸನಗರದ ಪರಿಸರ. ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸುವಾಗ ಅದರ ಘಟನೆಗಳೇ ಯಾವುದೋ ಗಳಿಗೆಯಲ್ಲಿ ಸ್ಫೂರ್ತಿ ನೀಡುತ್ತದೆ. ಏಕಾಂತದಲ್ಲಿ ಟ್ಯೂನ್ ಮೆಲುಕು ಹಾಕುತ್ತಾ ನಿದ್ರೆಗೆ ಜಾರುತ್ತೇನೆ. ನನಗೇ ಗೊತ್ತಿಲ್ಲದಂತೆ ಪದಗಳು ಮನಸಿಗೆ ಬಂದು ಥಟ್ಟನೆ ಎಚ್ಚರವಾಗುತ್ತದೆ.

`ಗಗನವೇ ಬಾಗಿ...` ಹಾಡು ಹುಟ್ಟಿದ ಸಮಯ?
`ಸಂಜು ವೆಡ್ಸ್ ಗೀತಾ` ಚಿತ್ರದ ನಿರ್ದೇಶಕ ನಾಗಶೇಖರ್ ಸನ್ನಿವೇಶದಲ್ಲಿ ನಾಯಕಿಯ ಭಾವ ಹೇಗಿರುತ್ತದೆ ಎಂಬುದನ್ನು ತಲೆಗೆ ಚೆನ್ನಾಗಿ ತುಂಬಿದ್ದರು. ಅದರ ಬಗ್ಗೆಯೇ ಯೋಚಿಸುತ್ತ ಈಜುಕೊಳವೊಂದರ ಬಳಿ ಕುಳಿತಿದ್ದಾಗ ಅದರ ನೀರಿನಲ್ಲಿ ಶುಭ್ರ ನೀಲಿ ಆಕಾಶದ ಪ್ರತಿಬಿಂಬ ಕಂಡಿತು. ಆಗಸವೇ ಕೆಳಗೆ ಬಂದು ನೀರಿನೊಂದಿಗೆ ಸಂಭಾಷಣೆಯಲ್ಲಿ ತೊಡಗಿದಂತೆ ಭಾಸವಾಗುತ್ತಿದ್ದ ಆ ದೃಶ್ಯ ಕಂಡು ತಟ್ಟನೆ ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ ಎಂಬ ಸಾಲು ಹೊಳೆಯಿತು.

ಚಿತ್ರರಂಗದಲ್ಲಿ ಕಹಿ ಅನುಭವ?
ವೈಯಕ್ತಿಕವಾಗಿ ಆಗಿಲ್ಲ. ಆದರೆ ಒಟ್ಟಾರೆ ಯುವ ಚಿತ್ರಸಾಹಿತಿಗಳಿಗೆ ಸರಿಯಾದ ಪ್ರೋತ್ಸಾಹ ದೊರಕುತ್ತಿಲ್ಲ ಎಂಬ ನೋವಿದೆ. ಇಂದಿನ ಟ್ರೆಂಡ್‌ಗೆ ತಕ್ಕುದಾದ ಸಾಹಿತ್ಯ ರಚನೆ ಮಾಡುತ್ತೇವೆ. ಅದರಲ್ಲಿ ಒಳ್ಳೆಯ ಸಾಹಿತ್ಯವೂ ಇವೆ, ಇಷ್ಟವಾಗದಂಥವೂ ಇವೆ. ಹೊಸಬರೆಂದ ಮಾತ್ರಕ್ಕೆ ಹಳೆಯ ತಲೆಮಾರಿನ ಚಿತ್ರಸಾಹಿತಿಗಳೊಟ್ಟಿಗೆ ಗುರುತಿಸದೆ ನಮ್ಮನ್ನು ಪ್ರತ್ಯೇಕವಾಗಿ ನೋಡುವುದು ಸರಿಯಲ್ಲ.

ಕನ್ನಡ ಗೀತೆಗಳಿಗೆ ಮಾರುಕಟ್ಟೆ ಇಲ್ಲವೆಂಬ ಮಾತು ಕೇಳಿಬರುತ್ತಿದೆಯಲ್ಲ?
ಖಂಡಿತವಾಗಿಯೂ ಇದೆ. ಕನ್ನಡ ಹಾಡುಗಳನ್ನು ಕೇಳುವವರ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿರುವ ಐಟಿ ಉದ್ಯೋಗಿಗಳು, ಹೊರರಾಜ್ಯದವರು, ಉತ್ತರ ಭಾರತೀಯರು ಕನ್ನಡ ಹಾಡುಗಳನ್ನು ಹೆಚ್ಚಾಗಿ ಕೇಳುವುದನ್ನು ಗಮನಿಸಿದ್ದೇನೆ. ಹಾಗೆ ನೋಡಿದರೆ ಬೇರೆ ಭಾಷೆಗಿಂತ ಇಲ್ಲಿಯೇ ಇಂಪಾದ ಸಾಹಿತ್ಯ ಮತ್ತು ಸಂಗೀತಕ್ಕೆ ಆದ್ಯತೆ ನೀಡುವ ಹಾಡುಗಳು ಹೆಚ್ಚು ಬರುತ್ತಿರುವುದು. ಆಡಿಯೊ ವಿಚಾರದಲ್ಲೂ ಕನ್ನಡ ಬೇರೆ ಭಾಷೆಗಳೊಂದಿಗೆ ಪೈಪೋಟಿ ಎದುರಿಸುತ್ತಿದೆ. ಅದನ್ನು ಸಮರ್ಥವಾಗಿ ಮೆಟ್ಟಿನಿಲ್ಲುವ ಛಾತಿಯೂ ಇದೆ.

ಸತತ ಸೋಲುಗಳು ಚಿತ್ರರಂಗವನ್ನು ಕಾಡುತ್ತಿದೆಯೇ?
ಇದು ನಿರಾಶವಾದದ ಮಾತು. ನನ್ನ ಪ್ರಕಾರ ಕನ್ನಡ ಚಿತ್ರರಂಗಕ್ಕಿದು ಸುವರ್ಣಯುಗ. ಹಿಂದಿ ಸೇರಿದಂತೆ ಭಾರತದ ವಿವಿಧ ಭಾಷೆಗಳ ಚಿತ್ರಗಳು ಮಕಾಡೆ ಮಲಗುತ್ತಿರುವಾಗ ಕನ್ನಡದಲ್ಲಿ ಚಿತ್ರಗಳು ಗೆಲ್ಲುತ್ತಿವೆ. ಸೋತ ಚಿತ್ರಗಳೂ ಇವೆ. ಆದರೆ ಸೋಲು ಸಹಜ. ವಾಸ್ತವವಾಗಿ ಕನ್ನಡ ಚಿತ್ರಗಳ ಮಾರುಕಟ್ಟೆ ವಿಶಾಲವಾಗಿರದಿದ್ದರೂ ಅದರ ಮಿತಿಯಲ್ಲಿಯೇ ಗೆಲ್ಲುತ್ತಿದೆ. `ಸಂಜುವೆಡ್ಸ್ ಗೀತಾ`, `ಹುಡುಗರು`, `ಜಾನಿ ಮೇರಾ ನಾಮ್`, `ಕಿರಾತಕ` ಹೀಗೆ ಚಿತ್ರಗಳು ಗೆಲ್ಲುತ್ತಿವೆ. ಹಾಡುಗಳೂ ಹಿಟ್ ಆಗಿವೆ. ಆದರೆ ನಮ್ಮವರ ನೆಗೆಟಿವ್ ಧೋರಣೆ ಗೆಲುವನ್ನು ಮರೆಮಾಚಿಸುತ್ತದೆ.

ಕನ್ನಡದ ಗಾಯಕರ ಅವಗಣನೆ ಆಗುತ್ತಿದೆ ಎನ್ನುವ ಆರೋಪದ ಬಗ್ಗೆ?
ನಿಜ. ಇತ್ತೀಚಿನ ದಿನಗಳಲ್ಲಿ ಸೋನು ನಿಗಂ, ಶ್ರೇಯಾ ಘೋಷಾಲ್, ಕುನಾಲ್ ಮುಂತಾದವರಿಗೆ ಹೆಚ್ಚಿನ ಮಣೆ ಹಾಕಲಾಗುತ್ತಿದೆ. ಆದರೆ ಹಿಂದಿನ ದಿನಗಳಿಂದಲೂ ನೋಡಿದಾಗ ಕನ್ನಡಿಗರು ಕನ್ನಡ ಚಿತ್ರ ಸಂಗೀತವನ್ನು ಎಂದೂ ಆಳಿದ್ದಿಲ್ಲ. ಎಸ್‌ಪಿಬಿ, ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶೀಲಾ ಹೀಗೆ ಇವರೆಲ್ಲರೂ ಪರಭಾಷೆಯವರೇ. ಆಗ ದಕ್ಷಿಣ ಭಾರತೀಯರು, ಈಗ ಉತ್ತರ ಭಾರತೀಯರು. ಅಷ್ಟೇ ವ್ಯತ್ಯಾಸ. ಕನ್ನಡಿಗರಿಗೆ ಅವರನ್ನು ಎದುರಿಸುವ ಸಾಮರ್ಥ್ಯವಿದೆ. ಆದರೆ ಅದನ್ನು ಪ್ರದರ್ಶಿಸುತ್ತಿಲ್ಲ. ರಾಜೇಶ್‌ಕೃಷ್ಣನ್, ನಂದಿತಾ, ಶಮಿತಾರಂತಹ ಕೆಲವರು ಮಾತ್ರ ಕನ್ನಡದ ಮುಂಚೂಣಿ ಗಾಯಕರಾಗಿ ಕಾಣಿಸುತ್ತಿದ್ದಾರೆ. ಆದರೆ ಕನ್ನಡದಲ್ಲಿ ಪ್ರತಿಭಾವಂತರು ಸಾಕಷ್ಟಿದ್ದಾರೆ. ವೇದಿಕೆಯನ್ನು ಸರಿಯಾಗಿ ಬಳಸಿಕೊಂಡು ಮುಂದೆ ಬಂದರೆ ನಮ್ಮ ಚಿತ್ರರಂಗವನ್ನು ನಾವೇ ಸಂಪೂರ್ಣ ಆಳುವ ಕಾಲ ಖಂಡಿತ ಬರುತ್ತದೆ.

ಭವಿಷ್ಯದ ದಿನಗಳು?
ಗೊತ್ತಿಲ್ಲ. ಬದಲಾಗುವ ಜನರ ಮನೋಭಾವಕ್ಕೆ ತಕ್ಕಂತೆ ಹಾಡುಗಳನ್ನು ಬರೆಯುತ್ತೇನೆ..
-ಅಭಿ ಕನ್ನಡಿಗ..

ದರ್ಶನ್ ಸಂಸಾರ ಛಿದ್ರ ನಟಿ ನಿಖಿತಾಗೆ ನಿಷೇಧ ( Actor Nikitha Banned )

ಚಲನಚಿತ್ರ ನಟ ದರ್ಶನ್ ಕುಟುಂಬದಲ್ಲಿ ಬಿರುಗಾಳಿಗೆ ಕಾರಣರಾಗಿದ್ದಾರೆ ಎನ್ನುವ ಕಾರಣದಿಂದ ಚಿತ್ರನಟಿ ನಿಖಿತಾ ಅವರಿಗೆ ಕನ್ನಡ ಚಿತ್ರರಂಗದಿಂದ ಮೂರು ವರ್ಷಗಳ ಕಾಲ ನಿಷೇಧ ಹೇರಲಾಗಿದೆ.

ಚಿತ್ರರಂಗದಲ್ಲಿ ಹೆಸರು ಗಳಿಸಿರುವ ನಾಯಕ ನಟನ ವೈಯಕ್ತಿಕ ಜೀವನದಲ್ಲಿ ಪ್ರವೇಶಿಸಿದ್ದು ಅವರ ಮೊದಲ ತಪ್ಪು. ಈ ಮೂಲಕ ಅವರ ಸಾಂಸಾರಿಕ ಜೀವನ ಬೀದಿಗೆ ಬೀಳುವಂತಾಯಿತು. ನಟ ದರ್ಶನ್ ಈ ಕಾರಣದಿಂದ ಜೈಲಿಗೆ ಹೋಗಿರುವುದರಿಂದ ಅವರು ಅಭಿನಯಿಸುತ್ತಿದ್ದ ಚಿತ್ರ ನಿರ್ಮಾಪಕರಿಗೆ ಅಪಾರ ನಷ್ಟವಾಗಿದೆ. ಹಲವಾರು ಕೋಟಿ ಬಂಡವಾಳ... ಮುಳುಗುವಂತಾಗಿದೆ.

ಚಿತ್ರರಂಗಕ್ಕೆ ಅಪಾರ ನಷ್ಟ ಉಂಟುಮಾಡಿದ ಹಿನ್ನೆಲೆಯಲ್ಲಿ ನಿಖಿತಾ ಅವರಿಗೆ ನಿಷೇಧ ಹೇರಲಾಗಿದೆ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ತಿಳಿಸಿದ್ದಾರೆ.

ಚಿತ್ರ ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿಯವರ ಮೇಲೆ ಹಲ್ಲೆ ನಡೆಸಿದ ನಂತರ ಪೊಲೀಸರಿಗೆ ಲಿಖಿತ ದೂರು ನೀಡಿದ್ದ ವಿಜಯಲಕ್ಷ್ಮಿ, ನಿಖಿತಾ ಅವರು ತಮ್ಮ ಸಂಸಾರದಲ್ಲಿ ಹುಳಿಹಿಂಡಿದ್ದಾರೆ ಎಂದು ಹೇಳಿದ್ದರು. ನಿರ್ಮಾಪಕರ ಸಂಘ ಈ ಬಗ್ಗೆ ವಿಜಯಲಕ್ಷ್ಮಿ ಅವರ ಜೊತೆ ಮಾತನಾಡಿ, ಮತ್ತಷ್ಟು ಮಾಹಿತಿಗಳನ್ನು ಸಂಗ್ರಹಿಸುವ ಮೂಲಕ ತ್ವರಿತವಾಗಿ ಈ ಕ್ರಮ ಕೈಗೊಂಡಿದೆ. ಈ ಬಗ್ಗೆ ಚಿತ್ರರಂಗದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಂಬೈ ಮೂಲದ ನಿಖಿತಾ ಕಳೆದ ಆರು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ದರ್ಶನ್ ಜೊತೆ ಈಗ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಿಷೇಧದಿಂದ ಈ ಚಿತ್ರದ ಮುಂದಿನ ಭಾಗಗಳ ಚಿತ್ರೀಕರಣ ಏನಾಗುತ್ತದೆ ಗೊತ್ತಿಲ್ಲ.

ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವುದನ್ನು ನಿಷೇಧಿಸಿರುವ ನಿರ್ಧಾರದಿಂದ ವಿಚಲಿತರಾಗಿರುವ ನಿಖಿತಾ, ನಿಷೇಧ ನಿರ್ಧಾರ ಆತುರದ್ದು, ಹಾಗೂ ಅನ್ಯಾಯದ್ದು ಎಂದಿದ್ದಾರೆ. ಈ ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದೂ ಅವರು ಹೇಳಿದ್ದಾರೆ..
- ಅಭಿ ಕನ್ನಡಿಗ..

Saturday, 10 September 2011

ನಟ ದರ್ಶನ್ ಅವರ ಕ್ರೂರ ಕೃತ್ಯ (Actor Darshan Tugudeep Arrested)

                                  

ಪತ್ನಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ನಟ ದರ್ಶನ್ ತೂಗುದೀಪ ಅವರನ್ನು ವಿಜಯನಗರ ಪೊಲೀಸರು ಶುಕ್ರವಾರ ನಸುಕಿನಲ್ಲಿ ಬಂಧಿಸಿ, ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ವಿಜಯನಗರದ ಗಾಯಿತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ದರ್ಶನ್, ವಿಜಯಲಕ್ಷ್ಮಿ ಅವರ ಕಿವಿ ಕತ್ತರಿಸಿದ್ದರಿಂದ ಹೊಲಿಗೆ ಹಾಕಲಾಗಿದೆ. ತಲೆಯಲ್ಲಿ ಸಹ ಗಾಯವಾಗಿದ್ದರಿಂದ ಅಲ್ಲಿಗೂ ಹೊಲಿಗೆ ಹಾಕಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕೆಲ ದಿನಗಳಿಂದ ಪತಿಯಿಂದ ದೂರವಾಗಿದ್ದ ವಿಜಯಲಕ್ಷ್ಮಿ ಅವರು ಮಗ ವಿನೀಶ್ ಜತೆ ತವರು ಮನೆಯಲ್ಲಿ ವಾಸವಾಗಿದ್ದರು. ವಿಜಯನಗರದ ಬಾಪೂಜಿ ಲೇಔಟ್‌ನಲ್ಲಿರುವ ಗೆಳತಿ ವಿದ್ಯಾ ಅವರ ಮನೆಗೆ ಎರಡು ದಿನಗಳ ಹಿಂದೆ ಹೋಗಿದ್ದ ವಿಜಯಲಕ್ಷ್ಮಿ ಅಲ್ಲಿಯೇ ನೆಲೆಸಿದ್ದರು.

ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಇನ್ನೋವಾ ಕಾರಿನಲ್ಲಿ ವಿದ್ಯಾ ಅವರ ಮನೆಗೆ ಬಂದ ದರ್ಶನ್ ಪತ್ನಿಯನ್ನು ಹೊರಗೆ ಕರೆದಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್, ವಿದ್ಯಾ ಮತ್ತಿತರರ ಜತೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ ಬಲ ಪ್ರದರ್ಶಿಸಿದ ಅವರು ಮನೆಯ ಮುಂದೆ ನಿಂತಿದ್ದ ವಿದ್ಯಾ ಅವರ ಕಾರಿನ ಗಾಜನ್ನು ಕೈಯಲ್ಲೇ ಒಡೆದು, ಎಲ್ಲರನ್ನೂ ತಳ್ಳಿ ಪತ್ನಿಯನ್ನು ಬಲವಂತವಾಗಿ ಕಾರಿನಲ್ಲಿ ಎಳೆದೊಯ್ದಿದ್ದಾರೆ.

ರಿವಾಲ್ವರ್ ಅನ್ನು ಪತ್ನಿಯ ತಲೆಗೆ ಇಟ್ಟು ಕೊಲೆ ಬೆದರಿಕೆ ಸಹ ಹಾಕಿದ್ದಾರೆ.  ವಾಹನ ಚಾಲನೆಯಲ್ಲಿದ್ದಾಗಲೇ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಪತ್ನಿಯನ್ನು ಸುಮಾರು ಎರಡು ಗಂಟೆಕಾಲ ವಾಹನದಲ್ಲೇ ಕೂರಿಸಿಕೊಂಡಿದ್ದ ದರ್ಶನ್ ಸಂಜೆ 6.30ರ ಸುಮಾರಿಗೆ ಅವರನ್ನು ಮತ್ತೆ ಮನೆಗೆ ಕರೆದುಕೊಂಡುಬಿಟ್ಟಿದ್ದಾರೆ. ಮೂರು ವರ್ಷದ ಮಗ ವಿನೀಶ್‌ನನ್ನೂ ಕೊಲ್ಲುವುದಾಗಿ ಅವರು ಕತ್ತು ಹಿಡಿದು ಮೇಲಕ್ಕೆ ಎತ್ತಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡು ಕುಸಿದು ಬಿದ್ದಿದ್ದ ವಿಜಯಲಕ್ಷ್ಮಿ ಅವರಿಗೆ ತಾಯಿ ಸುಮತಿ ಮತ್ತು ಗೆಳತಿ ವಿದ್ಯಾ ಮನೆಯಲ್ಲೇ ಚಿಕಿತ್ಸೆ ನೀಡಿದ್ದಾರೆ. ರಾತ್ರಿ ಸಹ ದರ್ಶನ್ ಮನೆಗೆ ಬಂದು ಹಲ್ಲೆ ನಡೆಸಬಹುದೆಂದು ಹೆದರಿದ ವಿಜಯಲಕ್ಷ್ಮಿ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಧ್ಯರಾತ್ರಿ 12.30ರ ಸುಮಾರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ವಿಜಯನಗರ ಪೊಲೀಸರು ವಾಹನದೊಂದಿಗೆ ಮನೆಗೆ ತೆರಳಿ ವಿಜಯಲಕ್ಷ್ಮಿ ಮತ್ತು ಮೂರು ವರ್ಷದ ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆಸ್ಪತ್ರೆಯಲ್ಲೇ ವಿಜಯಲಕ್ಷ್ಮಿ ಅವರಿಂದ ಹೇಳಿಕೆ ಪಡೆದ ಪೊಲೀಸರು ಆರೋಪಿ ಬಂಧನಕ್ಕೆ ಯತ್ನಿಸುತ್ತಿದ್ದಾಗ. ದರ್ಶನ್ ಅವರು ಆಸ್ಪತ್ರೆ ಬಳಿಯೇ ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಸಿಬ್ಬಂದಿ ಆಸ್ಪತ್ರೆ ಬಳಿಯೇ ಕಾದು ಕುಳಿತು ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಅಲ್ಲಿಗೆ ಬಂದ ದರ್ಶನ್ ಅವರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ಆರೋಪಿಯನ್ನು ನಗರದ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ಆರ್.ಹುಲಗಿ ಅವರ ಮನೆಗೆ ಸಂಜೆ ಹಾಜರುಪಡಿಸಲಾಯಿತು. ದರ್ಶನ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ನೀಡಿದರು. ನಟನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಆರೋಪಿಯ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆಯುವ ಸಾಧ್ಯತೆ ಇದೆ.

ಕಲ್ಲು ತೂರಾಟ: ನಟ ದರ್ಶನ್ ಅವರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ವಿಜಯನಗರ ಪೊಲೀಸ್ ಠಾಣೆ ಬಳಿ ಜಮಾಯಿಸಿದ ಅಭಿಮಾನಿಗಳು ದರ್ಶನ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲು ಯತ್ನಿಸಿದರು. ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿದ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು.

ಮಧ್ಯಾಹ್ನದ ವೇಳೆಗೆ ಠಾಣೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಅಭಿಮಾನಿಗಳು, ಠಾಣೆಯ ಸಮೀಪವೇ ಹೋಗುತ್ತಿದ್ದ ಬಿಎಂಟಿಸಿಯ ಮೂರು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂದಲೆ ನಡೆಸಿದರು.

`ಪತ್ನಿಯನ್ನು ಕಾರಿನಲ್ಲಿ ಕರೆದೊಯ್ದ ದರ್ಶನ್ ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ನಾವು ಕೂಡಲೇ ಕಾರ್ಯ ಪ್ರವೃತ್ತರಾಗಿ ದರ್ಶನ್‌ನನ್ನು ಬಂಧಿಸಿದೆವು, ರಿವಾಲ್ವರ್‌ನ್ನು ವಶಕ್ಕೆ ಪಡೆಯಲಾಗಿದೆ` ಎಂದು ಸಿದ್ದರಾಮಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ.ಮಂಜುಳಾ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿಜಯಲಕ್ಷ್ಮಿ ಅವರ ಆರೋಗ್ಯ ವಿಚಾರಿಸಿದರು. `ಹಲ್ಲೆಗೊಳಗಾಗಿರುವ ವಿಜಯಲಕ್ಷ್ಮಿಗೆ ಆಯೋಗದ ವತಿಯಿಂದ ಸೂಕ್ತ ರಕ್ಷಣೆ- ಬೆಂಬಲ ನೀಡಲಾಗುತ್ತದೆ` ಎಂದರು.

ನಟರಾದ ಅಂಬರೀಶ್, ಜಗ್ಗೇಶ್, ವಿಜಯ್, ಬುಲೆಟ್ ಪ್ರಕಾಶ್, ಹರೀಶ್ ರೈ, ನಿರ್ದೇಶಕ ನಾಗಣ್ಣ, ಪ್ರೇಮ್.  ಇತರರು ಆಸ್ಪತ್ರೆಗೆ ಭೇಟಿ ನೀಡಿದ್ದರು..


-ಅಭಿ ಕನ್ನಡಿಗ..