Monday, 12 September 2011

ದರ್ಶನ್ ಸಂಸಾರ ಛಿದ್ರ ನಟಿ ನಿಖಿತಾಗೆ ನಿಷೇಧ ( Actor Nikitha Banned )

ಚಲನಚಿತ್ರ ನಟ ದರ್ಶನ್ ಕುಟುಂಬದಲ್ಲಿ ಬಿರುಗಾಳಿಗೆ ಕಾರಣರಾಗಿದ್ದಾರೆ ಎನ್ನುವ ಕಾರಣದಿಂದ ಚಿತ್ರನಟಿ ನಿಖಿತಾ ಅವರಿಗೆ ಕನ್ನಡ ಚಿತ್ರರಂಗದಿಂದ ಮೂರು ವರ್ಷಗಳ ಕಾಲ ನಿಷೇಧ ಹೇರಲಾಗಿದೆ.

ಚಿತ್ರರಂಗದಲ್ಲಿ ಹೆಸರು ಗಳಿಸಿರುವ ನಾಯಕ ನಟನ ವೈಯಕ್ತಿಕ ಜೀವನದಲ್ಲಿ ಪ್ರವೇಶಿಸಿದ್ದು ಅವರ ಮೊದಲ ತಪ್ಪು. ಈ ಮೂಲಕ ಅವರ ಸಾಂಸಾರಿಕ ಜೀವನ ಬೀದಿಗೆ ಬೀಳುವಂತಾಯಿತು. ನಟ ದರ್ಶನ್ ಈ ಕಾರಣದಿಂದ ಜೈಲಿಗೆ ಹೋಗಿರುವುದರಿಂದ ಅವರು ಅಭಿನಯಿಸುತ್ತಿದ್ದ ಚಿತ್ರ ನಿರ್ಮಾಪಕರಿಗೆ ಅಪಾರ ನಷ್ಟವಾಗಿದೆ. ಹಲವಾರು ಕೋಟಿ ಬಂಡವಾಳ... ಮುಳುಗುವಂತಾಗಿದೆ.

ಚಿತ್ರರಂಗಕ್ಕೆ ಅಪಾರ ನಷ್ಟ ಉಂಟುಮಾಡಿದ ಹಿನ್ನೆಲೆಯಲ್ಲಿ ನಿಖಿತಾ ಅವರಿಗೆ ನಿಷೇಧ ಹೇರಲಾಗಿದೆ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ತಿಳಿಸಿದ್ದಾರೆ.

ಚಿತ್ರ ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿಯವರ ಮೇಲೆ ಹಲ್ಲೆ ನಡೆಸಿದ ನಂತರ ಪೊಲೀಸರಿಗೆ ಲಿಖಿತ ದೂರು ನೀಡಿದ್ದ ವಿಜಯಲಕ್ಷ್ಮಿ, ನಿಖಿತಾ ಅವರು ತಮ್ಮ ಸಂಸಾರದಲ್ಲಿ ಹುಳಿಹಿಂಡಿದ್ದಾರೆ ಎಂದು ಹೇಳಿದ್ದರು. ನಿರ್ಮಾಪಕರ ಸಂಘ ಈ ಬಗ್ಗೆ ವಿಜಯಲಕ್ಷ್ಮಿ ಅವರ ಜೊತೆ ಮಾತನಾಡಿ, ಮತ್ತಷ್ಟು ಮಾಹಿತಿಗಳನ್ನು ಸಂಗ್ರಹಿಸುವ ಮೂಲಕ ತ್ವರಿತವಾಗಿ ಈ ಕ್ರಮ ಕೈಗೊಂಡಿದೆ. ಈ ಬಗ್ಗೆ ಚಿತ್ರರಂಗದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಂಬೈ ಮೂಲದ ನಿಖಿತಾ ಕಳೆದ ಆರು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ದರ್ಶನ್ ಜೊತೆ ಈಗ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಿಷೇಧದಿಂದ ಈ ಚಿತ್ರದ ಮುಂದಿನ ಭಾಗಗಳ ಚಿತ್ರೀಕರಣ ಏನಾಗುತ್ತದೆ ಗೊತ್ತಿಲ್ಲ.

ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವುದನ್ನು ನಿಷೇಧಿಸಿರುವ ನಿರ್ಧಾರದಿಂದ ವಿಚಲಿತರಾಗಿರುವ ನಿಖಿತಾ, ನಿಷೇಧ ನಿರ್ಧಾರ ಆತುರದ್ದು, ಹಾಗೂ ಅನ್ಯಾಯದ್ದು ಎಂದಿದ್ದಾರೆ. ಈ ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದೂ ಅವರು ಹೇಳಿದ್ದಾರೆ..
- ಅಭಿ ಕನ್ನಡಿಗ..

No comments:

Post a Comment