Saturday, 10 September 2011

ನಟ ದರ್ಶನ್ ಅವರ ಕ್ರೂರ ಕೃತ್ಯ (Actor Darshan Tugudeep Arrested)

                                  

ಪತ್ನಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ನಟ ದರ್ಶನ್ ತೂಗುದೀಪ ಅವರನ್ನು ವಿಜಯನಗರ ಪೊಲೀಸರು ಶುಕ್ರವಾರ ನಸುಕಿನಲ್ಲಿ ಬಂಧಿಸಿ, ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ವಿಜಯನಗರದ ಗಾಯಿತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ದರ್ಶನ್, ವಿಜಯಲಕ್ಷ್ಮಿ ಅವರ ಕಿವಿ ಕತ್ತರಿಸಿದ್ದರಿಂದ ಹೊಲಿಗೆ ಹಾಕಲಾಗಿದೆ. ತಲೆಯಲ್ಲಿ ಸಹ ಗಾಯವಾಗಿದ್ದರಿಂದ ಅಲ್ಲಿಗೂ ಹೊಲಿಗೆ ಹಾಕಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕೆಲ ದಿನಗಳಿಂದ ಪತಿಯಿಂದ ದೂರವಾಗಿದ್ದ ವಿಜಯಲಕ್ಷ್ಮಿ ಅವರು ಮಗ ವಿನೀಶ್ ಜತೆ ತವರು ಮನೆಯಲ್ಲಿ ವಾಸವಾಗಿದ್ದರು. ವಿಜಯನಗರದ ಬಾಪೂಜಿ ಲೇಔಟ್‌ನಲ್ಲಿರುವ ಗೆಳತಿ ವಿದ್ಯಾ ಅವರ ಮನೆಗೆ ಎರಡು ದಿನಗಳ ಹಿಂದೆ ಹೋಗಿದ್ದ ವಿಜಯಲಕ್ಷ್ಮಿ ಅಲ್ಲಿಯೇ ನೆಲೆಸಿದ್ದರು.

ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಇನ್ನೋವಾ ಕಾರಿನಲ್ಲಿ ವಿದ್ಯಾ ಅವರ ಮನೆಗೆ ಬಂದ ದರ್ಶನ್ ಪತ್ನಿಯನ್ನು ಹೊರಗೆ ಕರೆದಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್, ವಿದ್ಯಾ ಮತ್ತಿತರರ ಜತೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ ಬಲ ಪ್ರದರ್ಶಿಸಿದ ಅವರು ಮನೆಯ ಮುಂದೆ ನಿಂತಿದ್ದ ವಿದ್ಯಾ ಅವರ ಕಾರಿನ ಗಾಜನ್ನು ಕೈಯಲ್ಲೇ ಒಡೆದು, ಎಲ್ಲರನ್ನೂ ತಳ್ಳಿ ಪತ್ನಿಯನ್ನು ಬಲವಂತವಾಗಿ ಕಾರಿನಲ್ಲಿ ಎಳೆದೊಯ್ದಿದ್ದಾರೆ.

ರಿವಾಲ್ವರ್ ಅನ್ನು ಪತ್ನಿಯ ತಲೆಗೆ ಇಟ್ಟು ಕೊಲೆ ಬೆದರಿಕೆ ಸಹ ಹಾಕಿದ್ದಾರೆ.  ವಾಹನ ಚಾಲನೆಯಲ್ಲಿದ್ದಾಗಲೇ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಪತ್ನಿಯನ್ನು ಸುಮಾರು ಎರಡು ಗಂಟೆಕಾಲ ವಾಹನದಲ್ಲೇ ಕೂರಿಸಿಕೊಂಡಿದ್ದ ದರ್ಶನ್ ಸಂಜೆ 6.30ರ ಸುಮಾರಿಗೆ ಅವರನ್ನು ಮತ್ತೆ ಮನೆಗೆ ಕರೆದುಕೊಂಡುಬಿಟ್ಟಿದ್ದಾರೆ. ಮೂರು ವರ್ಷದ ಮಗ ವಿನೀಶ್‌ನನ್ನೂ ಕೊಲ್ಲುವುದಾಗಿ ಅವರು ಕತ್ತು ಹಿಡಿದು ಮೇಲಕ್ಕೆ ಎತ್ತಿ ದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡು ಕುಸಿದು ಬಿದ್ದಿದ್ದ ವಿಜಯಲಕ್ಷ್ಮಿ ಅವರಿಗೆ ತಾಯಿ ಸುಮತಿ ಮತ್ತು ಗೆಳತಿ ವಿದ್ಯಾ ಮನೆಯಲ್ಲೇ ಚಿಕಿತ್ಸೆ ನೀಡಿದ್ದಾರೆ. ರಾತ್ರಿ ಸಹ ದರ್ಶನ್ ಮನೆಗೆ ಬಂದು ಹಲ್ಲೆ ನಡೆಸಬಹುದೆಂದು ಹೆದರಿದ ವಿಜಯಲಕ್ಷ್ಮಿ ಅವರು ಪೊಲೀಸ್ ನಿಯಂತ್ರಣ ಕೊಠಡಿಗೆ ಮಧ್ಯರಾತ್ರಿ 12.30ರ ಸುಮಾರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ವಿಜಯನಗರ ಪೊಲೀಸರು ವಾಹನದೊಂದಿಗೆ ಮನೆಗೆ ತೆರಳಿ ವಿಜಯಲಕ್ಷ್ಮಿ ಮತ್ತು ಮೂರು ವರ್ಷದ ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆಸ್ಪತ್ರೆಯಲ್ಲೇ ವಿಜಯಲಕ್ಷ್ಮಿ ಅವರಿಂದ ಹೇಳಿಕೆ ಪಡೆದ ಪೊಲೀಸರು ಆರೋಪಿ ಬಂಧನಕ್ಕೆ ಯತ್ನಿಸುತ್ತಿದ್ದಾಗ. ದರ್ಶನ್ ಅವರು ಆಸ್ಪತ್ರೆ ಬಳಿಯೇ ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಸಿಬ್ಬಂದಿ ಆಸ್ಪತ್ರೆ ಬಳಿಯೇ ಕಾದು ಕುಳಿತು ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಅಲ್ಲಿಗೆ ಬಂದ ದರ್ಶನ್ ಅವರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ಆರೋಪಿಯನ್ನು ನಗರದ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ಆರ್.ಹುಲಗಿ ಅವರ ಮನೆಗೆ ಸಂಜೆ ಹಾಜರುಪಡಿಸಲಾಯಿತು. ದರ್ಶನ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ನೀಡಿದರು. ನಟನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಆರೋಪಿಯ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆಯುವ ಸಾಧ್ಯತೆ ಇದೆ.

ಕಲ್ಲು ತೂರಾಟ: ನಟ ದರ್ಶನ್ ಅವರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ವಿಜಯನಗರ ಪೊಲೀಸ್ ಠಾಣೆ ಬಳಿ ಜಮಾಯಿಸಿದ ಅಭಿಮಾನಿಗಳು ದರ್ಶನ್ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲು ಯತ್ನಿಸಿದರು. ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿದ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು.

ಮಧ್ಯಾಹ್ನದ ವೇಳೆಗೆ ಠಾಣೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಅಭಿಮಾನಿಗಳು, ಠಾಣೆಯ ಸಮೀಪವೇ ಹೋಗುತ್ತಿದ್ದ ಬಿಎಂಟಿಸಿಯ ಮೂರು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂದಲೆ ನಡೆಸಿದರು.

`ಪತ್ನಿಯನ್ನು ಕಾರಿನಲ್ಲಿ ಕರೆದೊಯ್ದ ದರ್ಶನ್ ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ನಾವು ಕೂಡಲೇ ಕಾರ್ಯ ಪ್ರವೃತ್ತರಾಗಿ ದರ್ಶನ್‌ನನ್ನು ಬಂಧಿಸಿದೆವು, ರಿವಾಲ್ವರ್‌ನ್ನು ವಶಕ್ಕೆ ಪಡೆಯಲಾಗಿದೆ` ಎಂದು ಸಿದ್ದರಾಮಪ್ಪ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ.ಮಂಜುಳಾ ಅವರು ಆಸ್ಪತ್ರೆಗೆ ಭೇಟಿ ನೀಡಿ ವಿಜಯಲಕ್ಷ್ಮಿ ಅವರ ಆರೋಗ್ಯ ವಿಚಾರಿಸಿದರು. `ಹಲ್ಲೆಗೊಳಗಾಗಿರುವ ವಿಜಯಲಕ್ಷ್ಮಿಗೆ ಆಯೋಗದ ವತಿಯಿಂದ ಸೂಕ್ತ ರಕ್ಷಣೆ- ಬೆಂಬಲ ನೀಡಲಾಗುತ್ತದೆ` ಎಂದರು.

ನಟರಾದ ಅಂಬರೀಶ್, ಜಗ್ಗೇಶ್, ವಿಜಯ್, ಬುಲೆಟ್ ಪ್ರಕಾಶ್, ಹರೀಶ್ ರೈ, ನಿರ್ದೇಶಕ ನಾಗಣ್ಣ, ಪ್ರೇಮ್.  ಇತರರು ಆಸ್ಪತ್ರೆಗೆ ಭೇಟಿ ನೀಡಿದ್ದರು..


-ಅಭಿ ಕನ್ನಡಿಗ..

No comments:

Post a Comment